ನವದೆಹಲಿ: ಫೈಲ್ ಟ್ರಾನ್ಸ್ಫರ್ ಸೇವೆ ಒದಗಿಸುವ Dropbox ಅತಿ ಶೀಘ್ರದಲ್ಲಿಯೇ ಹೊಸ ಸೇವೆಯೊಂದನ್ನು ಆರಂಭಿಸಲಿದೆ. ಈ ಹೊಸ ಸೇವೆಯ ಮೂಲಕ ಬಳಕೆದಾರರು 100 ಜಿಬಿ ಮಿತಿಯೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ಫೈಲ್ ಗಳನ್ನು ಟ್ರಾನ್ಸ್ಫರ್ ಮಾಡಬಹುದಾಗಿದೆ. 'ಡ್ರಾಪ್ ಬಾಕ್ಸ್ ಟ್ರಾನ್ಸ್ಫರ್' ಹೆಸರಿನ ಈ ಸೇವೆ ಪ್ರಸ್ತುತ ಬೀಟಾ ಆವೃತ್ತಿಯಲ್ಲಿ ಬಿಡುಗಡೆಗೊಂಡಿದ್ದು, ಶೀಘ್ರವೇ ಈ ಸೇವೆಯನ್ನು ವಿಶ್ವಾದ್ಯಂತ ಜಾರಿಗೊಳಿಸುವುದಾಗಿ ಕಂಪನಿ ಹೇಳಿದೆ.
ಈ ಕುರಿತು ಹೇಳಿಕೆ ನೀಡಿರುವ ಕಂಪನಿ ಸದ್ಯ ಬಳಕೆಯಲ್ಲಿರುವ ಡ್ರಾಪ್ ಬಾಕ್ಸ್ ನ ಕಾರ್ಯಶೈಲಿಗಿಂತ ಡ್ರಾಪ್ ಬಾಕ್ಸ್ ಟ್ರಾನ್ಸ್ಫರ್ ಕಾರ್ಯಶೈಲಿ ತೀರಾ ಭಿನ್ನವಾಗಿದ್ದು, ಇದರಲ್ಲಿ ಡೆಲಿವರಿ ಕನ್ಫರ್ಮ್, ಶೇಖರಿಸಲಾಗಿರುವ ಫೈಲ್ ಗಳ ಸುಲಭ ಹುಡುಕಾಟ, ಫೈಲ್ ಲಿಂಕ್ ಲೋಗೋನಂತಹ ಹೊಸ ಹೊಸ ಆಯ್ಕೆಗಳನ್ನು ನೀಡಲಾಗಿದ್ದು, ಗ್ರಾಹಕರಿಗೆ ಇದರಿಂದ ತುಂಬಾ ಸಹಕಾರಿಯಾಗಲಿದೆ ಎಂದಿದೆ.
ಈ ಸೇವೆಯು ಬಳಕೆದಾರರಿಗೆ 100GB ವರೆಗಿನ ಫೈಲ್ಗಳನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ. ಇದನ್ನು ಬಳಸುವ ಬಳಕೆದಾರರು ಕಂಪ್ಯೂಟರ್ ಅಥವಾ ಡ್ರಾಪ್ಬಾಕ್ಸ್ ಖಾತೆಯಿಂದ ಫೈಲ್ಗಳನ್ನು ಕೇವಲ ಡ್ರ್ಯಾಗ್ ಮತ್ತು ಡ್ರಾಪ್ ಮಾಡುವ ಮೂಲಕ ಶೇರ್ ಮಾಡಬಹುದು. ಒಮ್ಮೆ ಫೈಲ್ಗಳನ್ನು ಆಯ್ಕೆ ಮಾಡಿದ ನಂತರ, ಡ್ರಾಪ್ಬಾಕ್ಸ್ ಬಳಸುವ ಹಾಗೂ ಬಳಸದೆ ಇರುವ ಜನರೂ ಸೇರಿದಂತೆ ಯಾರಿಗಾದರೂ ಸಹ ಈ ಫೈಲ್ ಗಳ ಲಿಂಕ್ ಅನ್ನು ವರ್ಗಾವಣೆ ಮಾಡಬಹುದಾಗಿದೆ.
ಡ್ರಾಪ್ ಬಾಕ್ಸ್ ನ ಈ ಹೊಸ ಆವೃತ್ತಿಯಲ್ಲಿ ಬಳಕೆದಾರರು ತಾವು ಕಳುಹಿಸುವ ಲಿಂಕ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಕೊನೆಯ ದಿನಾಂಕವನ್ನೂ ಸಹ ನಿಗದಿಪಡಿಸಬಹುದು. ಪಾಸ್ವರ್ಡ್ ಅಳವಡಿಕೆ, ಫೈಲ್ ಎಡಿಟ್ ಅಥವಾ ಫೈಲ್ ನ ಕಂಟೆಂಟ್ ತೆಗೆದುಹಾಕಲು ಸಹ ಬಳಕೆದಾರರಿಗೆ ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ. ಡ್ರಾಪ್ ಬಾಕ್ಸ್ ನ ಈ ಸೇವೆಯ ಬಿಡುಗಡೆಯಿಂದ ಮಾರುಕಟ್ಟೆಯಲ್ಲಿ ಸದ್ಯ ಫೈಲ್ ಟ್ರಾನ್ಸ್ಫರ್ ಗಾಗಿಯೇ ಬಳಕೆಯಲ್ಲಿರುವ ವಿಟ್ರಾನ್ಸ್ಫರ್, ಹೈಟಲ್ ಹಾಗೂ ಮೀಡಿಯಾಫೈರ್ ಆಪ್ ಗಳಿಗೆ ತೀವ್ರ ಪೈಪೋಟಿ ಎದುರಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.